ರೆವ. ಡಾ. ಬೆಥೇಲ್ ಸನ್ನಿಗೆ ಕೆಎಸ್‌ಜೆಯು ಪ್ರಶಸ್ತಿ
ಬೆಂಗಳೂರು : ಕರ್ನಾಟಕದಲ್ಲಿ ಆರೋಗ್ಯ ಸೇವಾ ಕ್ಷೇತ್ರ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಡಾ. ಬೆಥೇಲ್ ಸನ್ನಿಯವರನ್ನು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘ (ಕೆಎಸ್‌ಜೆಯು) ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನಲ್ಲಿ ನಡೆದ ಭಾರತೀಯ ಪತ್ರಕರ್ತರ ಒಕ್ಕೂಟದ (ಐಜೆಯು) ಎರಡು ದಿನಗಳ ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನದಲ್ಲಿ ಐಜೆಯು ಅಧ್ಯಕ್ಷರಾದ ಬಲ್ವಿಂದರ್ ಸಿಂಗ್, ಪ್ರಧಾನ ಕಾರ್ಯದರ್ಶಿ ಡಿ. ಸೋಮಸುಂದರ್, ಕೆಎಸ್‌ಜೆಯು ರಾಜ್ಯ ಅಧ್ಯಕ್ಷರಾದ ಜಾನಕಿ ಮೋಹನ್ ಹಾಗೂ ಸಹ ಕಾರ್ಯದರ್ಶಿ ಚಾಕೋ ಕೆ. ಥಾಮಸ್ ರವರೆಲ್ಲರು ಸೇರಿ ಪ್ರಶಸ್ತಿ ಪ್ರದಾನ ಮಾಡಿದರು.
ಎರಡೂವರೆ ದಶಕಗಳಿಗೂ ಅಧಿಕ ಕಾಲದಿಂದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಬೆಥೇಲ್ ಮೆಡಿಕಲ್ ಮಿಷನ್ ಆಸ್ಪತ್ರೆ ಮತ್ತು ಹಾಸ್ಮಾಟ್ ಎಜುಕೇಶನ್ ಗ್ರೂಪ್‌ನ ಸಂಸ್ಥಾಪಕರೂ ಅಧ್ಯಕ್ಷರೂ ಆಗಿದ್ದಾರೆ ರೆವ. ಡಾ. ಬೆಥೇಲ್ ಸನ್ನಿ.
ಅವರು ಬೆಂಗಳೂರು ಬೆಥೇಲ್ ಎಜಿ ಚರ್ಚ್‌ನ ಸಭಾ ಸದಸ್ಯರೂ ಸುವಾರ್ತಾ ಪ್ರಚಾರಕರೂ ಆಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಉಚಿತ ಆಹಾರ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಬೆಥೇಲ್ ಆಸ್ಪತ್ರೆಯ ಸಂಸ್ಥೆಗಳ ಮೂಲಕ ನಿರಂತರವಾಗಿ ಒದಗಿಸುತ್ತಿರುವ ಸೇವೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.




