ವಿಜಯನಗರದಲ್ಲಿ ‘ ಏಳು ಮತ್ತು ಪ್ರಕಾಶಿಸು’ ಸುವಾರ್ತಾ ಕೂಟವು ಮುಕ್ತಾಯಗೊಂಡಿದೆ:
ವಿಜಯನಗರ (ಕರ್ನಾಟಕ): ವಿಜಯನಗರ ಜಿಲ್ಲಾ ಸೇವಕರ ಕೂಟ ಹಾಗೂ ಬೆಂಗಳೂರು ವಿಕ್ಟರಿ ಇಂಟರ್ನ್ಯಾಷನಲ್ ಎ.ಜಿ. ಆರಾಧನಾ ಕೇಂದ್ರದ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿ.ಎನ್. ರಾಯಲ್ ಗಾರ್ಡನ್ ಸಭಾಂಗಣದಲ್ಲಿ ನವೆಂಬರ್ 4ರಿಂದ 6ರವರೆಗೆ ಆಯೋಜಿಸಲಾಗಿದ್ದ ‘ ಏಳು ಮತ್ತು ಪ್ರಕಾಶಿಸು’ (Arise and Shine) ಸುವಾರ್ತಾ ಕೂಟವು ಮುಕ್ತಾಯಗೊಂಡಿದೆ.
ವಿಜಯನಗರದ ಏಳು ಮತ್ತು ಪ್ರಕಾಶಿಸು ಸುವಾರ್ತಾ ಕೂಟದ ಕೆಲವು ದೃಶ್ಯಗಳು.
ಜಿಲ್ಲಾ ಸೇವಕರ ಕೂಟದ ಅಧ್ಯಕ್ಷರಾದ ರೆವ. ಎ. ವೆಸ್ಲಿ ಪ್ರಭು ಅವರು ಕೂಟವನ್ನು ಉದ್ಘಾಟಿಸಿದರು. ದಕ್ಷಿಣ ಭಾರತ ಎ.ಜಿ. ಸಹಾಯಕ ಅಧೀಕ್ಷಕರಾದ ರೆವ. ಡಾ. ರವಿ ಮಣಿ ಅವರು ಮುಖ್ಯ ಸಂದೇಶಗಾರರಾಗಿ ಭಾಗವಹಿಸಿ ದೇವರ ವಾಕ್ಯವನ್ನು ಸಾರಿದರು.
ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರು ಸೇರಿದಂತೆ ಆರು ತಾಲ್ಲೂಕುಗಳನ್ನು ಒಳಗೊಂಡ ವಿಜಯನಗರ ಜಿಲ್ಲೆಯ ವಿವಿಧ ಭಾಗಗಳಿಂದ ಸುವಾರ್ತಾ ಸೇವಕರು ಹಾಗೂ ವಿಶ್ವಾಸಿಗಳು ಸೇರಿದಂತೆ ಸಾವಿರಾರು ಜನರು ಈ ಕೂಟದಲ್ಲಿ ಭಾಗವಹಿಸಿದರು.
ಮೂರು ದಿನಗಳ ಕಾಲ ನಡೆದ ವಿಶೇಷ ಪ್ರಾರ್ಥನೆ ಹಾಗೂ ರೋಗ ಗುಣಪಡಿಸುವ ಸೇವೆಯಲ್ಲಿ ಅನೇಕರು ದೇವರ ಕೃಪೆಯಿಂದ ಆರೋಗ್ಯ ಸುಧಾರಣೆಯ ಅನುಭವವನ್ನು ಪಡೆದರು.
ಸಮಾರೋಪ ದಿನದಂದು ರೆವ. ವಿ. ಫ್ರಾನ್ಸಿಸ್ ಅವರು ದೇವರ ವಾಕ್ಯದ ಸಂದೇಶವನ್ನು ಸಾರಿದರು.
ವಿಜಯನಗರ ಜಿಲ್ಲಾ ಸೇವಕರ ಫೆಲೋಶಿಪ್ನ ಸೇವಕರು, ವಿಕ್ಟರಿ ಎ.ಜಿ. ತಂಡ ಹಾಗೂ ಸಂಯೋಜಕರಾದ ಯು. ಎಡ್ವಿನ್ ಅವರು ಕೂಟದ ಯಶಸ್ವಿ ಆಯೋಜನೆಗೆ ನೇತೃತ್ವ ವಹಿಸಿದರು.



