ವಿಕ್ಟರಿ ಮಹಿಳಾ ಸಮ್ಮೇಳನವು ಆಶೀರ್ವಾದಪೂರ್ಣವಾಗಿ ಸಮಾಪ್ತಿಗೊಂಡಿತು
ಆತ್ಮಿಕ ನವೀಕರಣಕ್ಕಾಗಿ ನೂರಾರು ಮಹಿಳೆಯರು ಒಂದಾಗಿ ಸೇರಿದ್ದು ಗಮನಾರ್ಹವಾಗಿತ್ತು
ಬೆಂಗಳೂರು : ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಪೆಂತೆಕೋಸ್ತ ಮಹಿಳೆಯರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ವಿಕ್ಟರಿ ಮಹಿಳಾ ಸಮ್ಮೇಳನವು ಗಮನಾರ್ಹ ಸಂಖ್ಯೆಯ ಮಹಿಳೆಯರ ಭಾಗವಹಿಸುವಿಕೆಯೊಂದಿಗೆ ಆಶೀರ್ವಾದಪೂರ್ಣವಾಗಿ ಸಮಾಪ್ತಿಗೊಂಡಿತು.
ಬೆಂಗಳೂರಿನ ವಿಕ್ಟರಿ ಇಂಟರ್‌ನ್ಯಾಷನಲ್ ಎ.ಜಿ. ಆರಾಧನಾ ಕೇಂದ್ರದಲ್ಲಿ ನಡೆದ ಈ ಸಮ್ಮೇಳನವನ್ನು ವಿಕ್ಟರಿ ಇಂಟರ್‌ನ್ಯಾಷನಲ್ ಎ.ಜಿ. ಆರಾಧನಾ ಕೇಂದ್ರದ ಹಿರಿಯ ಸಭಾ ಸೇವಕರೂ, ಎಸ್‌ಐಎಜಿ (SIAG) ಸಹಾಯಕ ಅಧೀಕ್ಷಕರೂ ಆದ ಪಾಸ್ಟರ್ ಡಾ. ರವಿ ಮಣಿ ಉದ್ಘಾಟಿಸಿದರು.
ಸಿಸ್ಟರ್ ರೀಬಾ ಗಾಡ್ಲಿ ಅವರು ಮುಖ್ಯ ಸಂದೇಶವನ್ನು ನೀಡಿದರು. ದೇವರೊಂದಿಗಿನ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸಿಕೊಳ್ಳುವುದರ ಜೊತೆಗೆ, ದೇವರು ನೀಡಿದ ಕರೆಯ ಅನುಸಾರ ಧೈರ್ಯದಿಂದಲೂ ಸ್ಪಷ್ಟವಾದ ಗುರಿಯೊಂದಿಗೂ ಜೀವನ ನಡೆಸಲು ಮಹಿಳೆಯರು ಮುಂದೆ ಬರಬೇಕೆಂದು ತಮ್ಮ ಸಂದೇಶದಲ್ಲಿ ಕರೆ ನೀಡಿದರು. ಸಿಸ್ಟರ್ ಲೀನಾ ಪ್ರಶಾಂತ್ ಅವರು ಆರಾಧನೆಯನ್ನು ಮುನ್ನಡೆಸಿದರು.
ಪಾಸ್ಟರ್ ಸೂಸನ್ ರವಿ ಅವರು ಸಮ್ಮೇಳನದ ಮುಖ್ಯ ಆಯೋಜಕರಾಗಿದ್ದರು. ಐಕ್ಯತೆ, ನಂಬಿಕೆ ಮತ್ತು ನಿರೀಕ್ಷೆ ಎಂಬ ಮೌಲ್ಯಗಳ ಆಧಾರದ ಮೇಲೆ ಮಹಿಳೆಯರು ಮುನ್ನಡೆಯಬೇಕೆಂದು ತಮ್ಮ ಸ್ವಾಗತ ಭಾಷಣದಲ್ಲಿ ಅವರು ಸಭಿಕರಿಗೆ ಕರೆ ನೀಡಿದರು.
ಬೆಂಗಳೂರಿನ ವಿ.ಐ.ಎ.ಜಿ. ಸಭಾಂಗಣದಲ್ಲಿ ನಡೆದ ವಿಕ್ಟರಿ ಮಹಿಳಾ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಿದ ಮಹಿಳೆಯರು
“ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರಿ” (ಫಿಲಿಪ್ಪಿಯವರಿಗೆ 4:2) ಎಂಬುದು ಸಮ್ಮೇಳನದ ಮುಖ್ಯ ಧ್ಯೇಯವಾಕ್ಯವಾಗಿತ್ತು.
ಕರ್ನಾಟಕದಾದ್ಯಂತ ವಿವಿಧ ಪ್ರದೇಶಗಳಿಂದ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರಿಂದ ಈ ಸಮ್ಮೇಳನವು ನಂಬಿಕೆ, ಅನ್ಯೋನ್ಯತೆ ಮತ್ತು ಆತ್ಮಿಕ ಐಕ್ಯತೆಯ ಮಹತ್ವದ ಸಮಾಗಮವಾಗಿ ಮೂಡಿಬಂದಿತು. ಆತ್ಮಿಕ ಪ್ರೇರಣೆಯನ್ನೂ ಪರಿಶುದ್ಧಾತ್ಮನ ಶಕ್ತಿಯನ್ನೂ ಪಡೆದುಕೊಂಡು ಭಾಗವಹಿಸಿದ ಮಹಿಳೆಯರು ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು.
ವರದಿ: ಚಾಕೋ ಕೆ. ಥೋಮಸ್, ಬೆಂಗಳೂರು




